ಕಾಡು ನೀಲಿ

ಇಂಡಿಗೋಫೆರ ಆರ್ಟಿಕ್ಯುಲೇಟ ಎಂಬ ಶಾಸ್ತ್ರಿಯ ನಾಮವುಳ್ಳ ಪೊದೆ ಸಸ್ಯ. ಲೆಗ್ಯುಮಿನೋಸೀ ಕುಟುಂಬದ ಪ್ಯಾಪಿಲಿಯೋನೇಸೀ ಉಪಕುಟುಂಬಕ್ಕೆ ಸೇರಿದೆ. ಭಾರತದ ಮೂಲವಾಸಿ ಇದು. ಬಿಹಾರದ ಕೆಲವು ಭಾಗಗಳಲ್ಲಿ, ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. ಈಗೀಗ ಅರೇಬಿಯ, ಈಜಿಪ್ಟ್ ಮತ್ತು ಕೆಲವು ಮೆಡಿಟರೇನಿಯನ್ ದೇಶಗಳಲ್ಲಿ ಇದನ್ನು ಬೆಳೆಸಲಾಗುತ್ತಿದೆ. ಇದರ ಎಲೆಗಳು ಸಂಯುಕ್ತ ಮಾದರಿಯವು. ಒಂದೊಂದು ಎಲೆಯೂ ಸುಮಾರು 2"-3"ಉದ್ದವಿದೆ. ಪ್ರತಿ ಎಲೆಯಲ್ಲಿ ಸುಮಾರು 3-9 ಕಿರು ಎಲೆಗಳಿವೆ. ಎಲೆಯ ಎರಡು ಪಾಶ್ರ್ವಗಳ ಬಣ್ಣ ಕೆಂಪುಮಿಶ್ರಿತ ಹಸಿರು. ಹೂಗಳು ಚಿಕ್ಕ ತೊಟ್ಟುಳ್ಳ ಅಂತ್ಯಾರಂಭಿ ಹೂಗೊಂಚಲಿನಲ್ಲಿ ಸಮಾವೇಶಗೊಂಡಿವೆ. ಕಾಡುನೀಲಿ ಗಿಡದಿಂದ ಗುಜರಾತಿನಲ್ಲಿ ಬಹಳ ಹಿಂದೆ ಬಣ್ಣವನ್ನು ತೆಗೆಯಲಾಗುತ್ತಿತ್ತು. ಈಗ ಇಂಡಿಗೋಫೆರದ ಇತರ ಪ್ರಭೇದಗಳಿಂದ ಈ ಬಣ್ಣವನ್ನು ತೆಗೆಯುತ್ತಾರೆ. ಈ ಗಿಡವನ್ನು ಬತ್ತದ ಗದ್ದೆಗಳಿಗೆ ಹಸಿರು ಗೊಬ್ಬರವನ್ನಾಗಿ ಬಳಸುತ್ತಾರೆ. ಕ್ಷಾಮಪ್ರದೇಶಗಳಲ್ಲಿ ಬೀಜಗಳನ್ನು ತಿನ್ನುತ್ತಾರೆ. ಗಿಡದ ಬೇರು, ಎಲೆಗಳಿಂದ ಒಂದು ಬಗೆಯ ಕಹಿ ಪೌಷ್ಟಿಕಾಂಶವನ್ನು ತಯಾರಿಸುವರು. ಕೆಲವು ವೇಳೆ ಬೀಜಗಳನ್ನು ಜಂತುನಾಶಕವಾಗಿ ಉಪಯೋಗಿಸುವರು.

(ಎಸ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ